ಅಜನೊಮ್ಮೆ ಕುಂಭಿನಿಯ ಒಳಹೊಕ್ಕಿ ನೋಡಿದನು
ಮುಗುದತೆಯ ಮಾನ ದಂಡ ಹಿಡಿದು
ಸುಜನರ ಮುಖವಾಡ ಕಳಚಿಟ್ಟು ಕಂಡನು
ಪ್ರೇತಗಳ ದಂಡಲ್ಲಿ ಮುಗ್ದ ಯಾರು?
ಆಕೆ ಇರಬಹುದೇ ? ಈತನ್ಯಾಕಲ್ಲ?
ಇಣುಕಿದನು - ಅಳುಕಿದನು ಮರುಗಿದನು
ಮುಗ್ದನನು ಕಾಣದೆಯೇ ದಿಗಿಲಾದನು
ಏಕೆಂದರೆ ಕಾರ್ಮೋಡದಲ್ಲೆಲ್ಲ ಬ್ರಂಗ ಬಿಂದು
ಶಾಂತಿಯ ಬೆನ್ನೇರಿ ಸತ್ಯದ ಕುದುರೆಯಲಿ
ಹೊರಟಿಹನು ಹುಡುಕಲು ಮುಗುದ ಜೀವ
ಎಲ್ಲೆಲ್ಲೂ ನಕಾರ ಕಾಮಕ್ಕೆ ಆಕಾರ
ನನ್ನ ಸೃಷ್ಟಿಯೇ ಎಂದು ಪ್ರಶ್ನಿಸಿದನು
ಕಪಟತನವು ಮೆರಗಿಹುದು,ಮುಗುದತೆಯು ಮರಗಿಹುದು
ಓಂಕಾರದಲ್ಲೆಲ್ಲ ವಿಕಾರದ ಕುರುಹು
ಅದೇ ಮಸನದಲಿ ಅನು ದಿನವು ಹುಡುಕಿದರೂ
ಸೃಷ್ಟಿಕರ್ತನ ಸುತ್ತ ಅಂಧ ಸಾಲು!
ಕೊನೆಗೂ ಫಲಿಸಿತ್ತು ಅಜನ ಶೋಧ
ತಾಯಿಯ ಗರ್ಭದಲಿ ಒಳಹೊಕ್ಕಿ ಕಂಡನು
ಅರಳಿತ್ತು ಅಲ್ಲೊಂದು ಮುಗುದ ಹೂವು
"ಇರುವ ಮುಗುದತೆಯೆಲ್ಲ ಜೀವ ತಳೆದು"
---ವೀರಭದ್ರ ಎಸ್ ಹೆಗಡೆ