ಸಂಬಂಧ ಇಲ್ಲದ ನಾನು-ವು
ನಮ್ಮೆಲ್ಲರ 'ನಾನೇ' ಹಾಗೆ ,
ವಾರೆ ನೋಟದ ನಡುವೆ ಸಿಲುಕೋ ಕಸದ ಹಾಗೆ,
ಆಗು ಹೋಗುಗಳ ತೂಕಕೆ ತೂಗಿ ಬಾಗೋ ಚೀಲದಂತೆ ,
ಸಣ್ಣ ಸಣ್ಣ ಬಿರುಕುಗಳ ತುಂಬಿ.
ನಮ್ಮೆಲ್ಲರ 'ನಾವೇ' ಹೀಗೆ ,
ಜೇನ ಹಿಂಡಿನ ಒಳಗೆ ಸಿಗುವ ಹನಿಯ ಹಾಗೆ,
ಬಿಗಿದ ನಿಲುವಿಗೆ ನಲಗೋ ನಲಿವಿನಂತೆ ,
ಸಣ್ಣ ಸಣ್ಣ ಹುಳುಕುಗಳ ತುಂಬಿ.
ಸಂಗಕೆ ಹೊಂದದ ಪದ್ಧತಿ ಇದ್ದರೆ,
ಗುಂಪಿಗೆ ಸೇರದ ವಿಷಯವೇ ನಾನು.
ಗುಂಪಿಗೆ ಹೊಂದಿದ ರೀತಿಯು ತಿಳಿದರೆ,
ಸಂಗಕೆ ಸೇರಿದ ಸಶೇಷವೆ ನಾನು.
ಅರ್ಥವೇ ಇಲ್ಲದ ಸಾಲುಗಳಾದರೂ,
ಹುಡುಕುವ ಮನದಲಿ ಭಾವವೇ ನಾನು.
ಹೊಮ್ಮುವ ನಾದವು ಒಂದೆಯೇ ಆದರು
ಕೇಳುವ ಕಿವಿಗಳ ಪರದೆಯೇ ನಾವು !
ಅವರವರ ಅನುಗುಣಕೆ ಅಗಿದು ನುಂಗುವ ಹಾಗೆ,
ನಾನು ನಾವೇ ಆಗಿರುವೆನು.
ನಮ್ಮ ಒಳಗಿನ ನಿಯತಿ , ನನ್ನದಲ್ಲದ ವಿನತಿ,
ಹೊಂದಿಕೊಳ್ಳದ ಗಾಲಿ, ದೂಡುತಿಹೆವು …
---ವೀರಭದ್ರ ಎಸ್ ಹೆಗಡೆ