ಹುಟ್ಟುತಲೇ ಊದುವರು ಶಂಖ
ಜಾತಿ ಜಾಗಟೆಯ ಸದ್ದಿನಲಿ ಹೆಸರಿಟ್ಟು.
ಮೈ ತೊಳೆದು, ಕೆಸರ ಹಚ್ಚಿ ಬೀಗುವರು
ನಮ್ಮೊಳಗಿನ ಗೋಜಲಿನ ಕರ್ಮದಿಂದ!
ನಂಬಿಕೆಯ ಕೋಟೆಗೆ ನೂಕಿ ಕೈ ಮುಗಿವರು
ತೀರದ ದಾಹದಲೇ ಸ್ವಾರ್ಥ ಮೆರೆದು.
ವಿವೇಚನೆಗೆ ಮೀರಿದ ಬುದ್ದಿ ಬೊಗಳುವುದು
ಗತ ಸಾಧನೆಗಳ ಗೀಳಿನ ಮರ್ಮದಿಂದ!
ಧರ್ಮಾಂಧರಿಂದ ಬೆಳಗೊ ಆರತಿಯೇನು?
ನಮ್ಮ ತನವ ಸಾಧಿಸಿ ಹೊತ್ತಿಸಿದ ಬೆಂಕಿ.
ಅಳಚಿ ಹೋಗುವುದೇನು ಅಸ್ತಿಪಂಜರಕ್ಕೆಲ್ಲ
ಬಡಿದ ರಕ್ತದ ಕಲೆ, ದ್ವೇಷದ
ದಳ್ಳುರಿಯಿಂದ.
ತಿಳಿದೂ ಹಾಗೆಯೇ ನಡೆಯುವೆವು ,ಭೂತದ ಹಾದಿಯಲಿ
ಅದೇ ಧರ್ಮಕೋಟೆಗೆ ಜಾತಿಯನ್ನು ಜೋಲಿಸಿ ,
ಪಾಪ ಪುಣ್ಯಗಳ ಕಂದಕಗಳನು ಅಗೆದು,
ಆಚರಣೆಯ ಕಮಾನುಗಳಿಗೆ ಬಾಗಿ !!
ಕೊನೆಗೂ ಹೊರಗೆ ಬಾರರು,
ಏಳು ಸುತ್ತುಗಳ ದಾಟಿಯೂ,
ಕಡು ಬಂಡೆಗಳ ಮೆಟ್ಟಿ ತುತ್ತ ತುದಿಯಲಿದ್ದರೂ,
ಅಲ್ಲಿಂದ ದೊಪ್ಪೆಂದು ಒಳಗೇ ಬೀಳುವರು.
ಮತ್ತೆ ಮೈ ತೊಳೆದು, ಕೆಸರ ಹಚ್ಚಿ ಬೀಗುವರು
ನಮ್ಮೊಳಗಿನ ಗೋಜಲಿನ ಕರ್ಮದಿಂದ!
--ವೀರಭದ್ರ ಎಸ್ ಹೆಗಡೆ
No comments:
Post a Comment